ಮಲ್ಲಿಕಾರ್ಜುನ ಕವಿ
ಸು. 1240. ಈ ಹೆಸರಿನ ಕವಿಗಳು ಅನೇಕರಿದ್ದರೂ ಈಗ ತಿಳಿದಿರುವಂತೆ ಸೂಕ್ತಿಸುಧಾರ್ಣವ ಎಂಬ ಕಾವ್ಯಸಂಕಲನದ ಸಂಯೋಜಕ ಮಲ್ಲಿಕಾರ್ಜುನನೇ ಅತ್ಯಂತ ಪ್ರಾಚೀನ. ಸೂಕ್ತಿಸುಧಾರ್ಣವದ ಪ್ರತಿ ಆಶ್ವಾಸಾಂತ್ಯ ಗದ್ಯದಲ್ಲಿ ಪರಮಚಿದಾನಂದ ಮಲ್ಲಿಕಾರ್ಜುನ ಕವೀಶ್ವರ ಸಂಯೋಜಿತಮುಮಪ್ಪ ಸೂಕ್ತಿ ಸುಧಾರ್ಣವ ಎಂದು ಹೇಳಿರುವುದರಿಂದಲೂ ಶಬ್ದ ಮಣಿದರ್ಪಣದ ಕರ್ತೃ ಕೇಶಿರಾಜ ತಾನು ಯೋಗಿಪ್ರವರ ಚಿದಾನಂದ ಮಲ್ಲಿಕಾರ್ಜುನ ಸುತನು ಎಂದು ಹೇಳಿಕೊಂಡಿರುವುದರಿಂದಲೂ ಚಿದಾನಂದ ಮಲ್ಲಿಕಾರ್ಜುನ ಎಂಬುದು ಇವನ ಪೂರ್ಣ ಹೆಸರು ಎಂದು ಕಾಣುತ್ತದೆ. ಮಲ್ಲ, ಮಲ್ಲಪ ಎಂಬವು ಸಂಕ್ಷಿಪ್ತನಾಮಗಳು. ಇವನು
ಸರಸ ಕವೀಶ್ವರ ಸಭೆಯೊಳ್
ಸರಸ ಕವೀಶಂ ವಿಶಿಷ್ಟಮುನಿಗಳ ಸಭೆಯೊಳ್
ಪರಮಮುನಿ ಬುಧರ ಸಭೆಯೊಳ್
ಪರಮ ಬುಧನೆನಿಪ್ಪನೀ ಚಿದಾನಂದ ಬುಧಂ
ಎಂದು ತನ್ನ ವಿಷಯವಾಗಿ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ. ಮುನಿಯಾದ ಮೇಲೆ ಎಂದರೆ ಸನ್ಯಾಸಸ್ವೀಕಾರ ಮಾಡಿದ ಮೇಲೆ ಚಿದಾನಂದ ಎಂಬ ಹೆಸರನ್ನು ಇಟ್ಟುಕೊಂಡಿರಬಹುದು. ಯೋಗಿಪ್ರವರನಾಗಿದ್ದನೆಂಬುದಕ್ಕೆ ಮಗ ಕೇಶಿರಾಜನ ಮಾತೂ ಸಾಕ್ಷ್ಯವಾಗಿದೆ. ಕಾವ್ಯಾಭಿರುಚಿಯುಳ್ಳ ವಿದ್ವಾಂಸನಾಗಿದ್ದನೆಂಬುದಕ್ಕೆ ಸೂಕ್ತಿ ಸುಧಾರ್ಣವವೇ ಸಾಕ್ಷಿ. ಸತ್ಕವಿಮಲ್ಲಪನೆಂದು ಕರೆದುಕೊಂಡಿರುವನಾದರೂ ಈತನ ಗ್ರಂಥವಾವುದೂ ದೊರೆತಿಲ್ಲ. ಸೂಕ್ತಿಸುಧಾರ್ಣವದ ಪೀಠಿಕಾಪದ್ಯಗಳು ಆಶ್ವಾಸಾರಂಭದ ಸೂಚನಾಪದ್ಯಗಳೂ ಹೊಯ್ಸಳ ವೀರಸೋಮೇಶ್ವರನ ಸ್ತುತಿಪದ್ಯಗಳೂ ಮಲ್ಲಿಕಾರ್ಜುನನೇ ಬರೆದವು ಎಂದು ತಿಳಿಯಲು ಅಡ್ಡಿಯಿಲ್ಲ.
ಮಲ್ಲಿಕಾರ್ಜುನ ವೈಯಾಕರಣಿ ಕೇಶಿರಾಜನ ತಂದೆ; ಕವಿ ಜನ್ನನ (ಸು. 1209-40) ಸೋದರಿಯ ಗಂಡ. ಯಾದವ ಕಟಕಾಚಾರ್ಯ ಸುಕವಿ ಸುಮನೋಬಾಣನ ಜಾಮಾತೃ. ಈತ ವೀರಹೊಯ್ಸಳಸೋಯಿದೇವರಾಯ ವಿನೋದಾಕರ್ಣನ ಕೌತುಕೋತ್ಪಾದಿತವಾಗಿ ತಾನು ಗ್ರಂಥವನ್ನು ಸಂಯೋಜಿಸಿರುವುದಾಗಿ ಆಶ್ವಾಸಾಂತ್ಯಗದ್ಯದಲ್ಲಿ ಹೇಳಿಕೊಂಡಿರುವುದರಿಂದಲೂ ಸೋಮೇಶ್ವರನ ಸ್ತುತಿ ಪದ್ಯಗಳು ಗ್ರಂಥದಲ್ಲಿ ಇರುವುದರಿಂದಲೂ ಸೂಕ್ತಿಸುಧಾರ್ಣವ ಆ ರಾಜನ ಕಾಲದಲ್ಲಿ ಸಂಯೋಜಿತವಾಗಿರುವುದು ಸ್ವಯಂಸ್ಪಷ್ಟ.. ಅನೇಕ ಕವಿಗಳ ಕಾಲನಿರ್ಣಯಕ್ಕೆ ಈ ಗ್ರಂಥ ನಿರ್ವಿವಾದ ಪ್ರಮಾಣವಾಗಿರುವುದರಿಂದ ಸೂಕ್ತಿಸುಧಾರ್ಣವದ ಕಾಲಕ್ಕೆ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಪ್ರಾಮುಖ್ಯವಿದೆ. ಸೂಕ್ತಿಸುಧಾರ್ಣವದಲ್ಲಿ ಜನ್ನನ ಅನಂತನಾಥ ಪುರಾಣದ ಪದ್ಯಗಳು ಉದಾಹೃತವಾಗಿವೆ. ಅನಂತನಾಥ ಪುರಾಣದ ರಚನೆಯ ಕಾಲ 1230. ವೀರಸೋಮೇಶ್ವರ 1228ರಿಂದ 1256ರ ತನಕ ಆಳಿದನೆಂದು ತಿಳಿದುಬಂದಿದೆ. ಆದ್ದರಿಂದ ಇವನ ಆಳ್ವಿಕೆಯಲ್ಲಿ ರಚಿತವಾದ ಸೂಕ್ತಿಸುಧಾರ್ಣವದ ಕಾಲವನ್ನು ಸು. 1240 ಎಂದು ಇಟ್ಟುಕೊಳ್ಳಬಹುದು.

ಕವಿಯ ಮತದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಕವಿಚರಿತೆಕಾರರಾದ ಆರ್. ನರಸಿಂಹಾಚಾರ್ ಮತ್ತು ಕೆ.ಜಿ. ಕುಂದಣಗಾರರು ಮಲ್ಲಿಕಾರ್ಜುನ ಜೈನನೆಂದು ಅಭಿಪ್ರಾಯಪಟ್ಟಿದ್ದಾರೆ. ಬಸರಾಳು ಶಾಸನ ಚಿದಾನಂದನೆಂಬವನಿಂದ ರಚಿತವಾಗಿದ್ದು ಅವನು ಸ್ಮಾರ್ತಬ್ರಾಹ್ಮಣನೆಂದು ಕವಿಚರಿತಕಾರರೇ ನಿಶ್ಚಯಿಸಿದ್ದಾರೆ. ಮಲ್ಲಿಕಾರ್ಜುನ ಜೈನರಾದ ಜನ್ನ, ಕೇಶಿರಾಜರ ಬಂಧುವಾಗಿರುವುದೂ ಗ್ರಂಥದಲ್ಲಿ ಜಿನಸ್ತುತಿಯಿರುವುದೂ ಅವನು ಜೈನನೆಂಬುವುದಕ್ಕೆ ಪ್ರಬಲ ಪ್ರಮಾಣಗಳಾಗಲಾರವು. ಗ್ರಂಥದ ನಾಲ್ಕು ಪ್ರಮಾಣಭೂತ ಹಸ್ತಪ್ರತಿಗಳಲ್ಲಿ ಜಿನಸ್ತುತಿಯಿಲ್ಲದಿರುವುದರಿಂದಲೂ ಶಾಸನದ ಚಿದಾನಂದನೂ ಮಲ್ಲಿಕಾರ್ಜುನ ಚಿದಾನಂದನೂ ಒಬ್ಬನೇ ವ್ಯಕ್ತಿ ಎನ್ನಲು ಬಾಧಕವಿಲ್ಲದಿರುವುದರಿಂದಲೂ ಗ್ರಂಥದಲ್ಲಿ ವೈದಿಕ ಪಕ್ಷಪಾತ ಸ್ಪಷ್ಟವಾಗಿರುವುದರಿಂದಲೂ ಮಲ್ಲಿಕಾರ್ಜುನ ವೈದಿಕ ಮತಾನುಯಾಯಿಯಾಗಿದ್ದನೆಂದು ಹೇಳಬಹುದು. ಆದರೆ ಈತ ಜೈನಮತಕ್ಕೆ ಸೇರಿದ್ದಿರಬಹುದೆಂಬುದು ಬಹುಜನ ವಿದ್ವಾಂಸರ ಅಭಿಪ್ರಾಯ. ಒಂದೇ ಕುಟುಂಬ ವರ್ಗದವರು ಬೇರೆ ಬೇರೆ ಮತಧರ್ಮಗಳನ್ನು ಅವಲಂಬಿಸುತ್ತಿದ್ದುದು ಆ ಕಾಲದಲ್ಲಿ ಅಪೂರ್ವವಾಗಿರಲಿಲ್ಲ.

ಪಂಪ, ಜನ್ನ, ಗುಣನಂದಿ, ಪೊನ್ನ, ಗಜಾಂಕುಶ ಇವರನ್ನು ಮಲ್ಲಿಕಾರ್ಜುನ ಹೊಗಳಿದ್ದಾನೆ. ಇವರ ಗ್ರಂಥಗಳಿಂದ ಮಾತ್ರವಲ್ಲದೇ, ತನಗಿಂತ ಪ್ರಾಚೀನರಾದ ಸುಮಾರು ಇಪ್ಪತ್ತೈದು ಕವಿಗಳ ಗ್ರಂಥಗಳಿಂದ ಸುಮಾರು 2,200 ಪದ್ಯಗಳನ್ನು ಆಯ್ದು ಕಲೆಹಾಕಿದ್ದಾನೆ. ಪೀಠಿಕಾ ಪ್ರಕರಣದ ಮೊದಲ ಆಶ್ವಾಸವನ್ನು ಬಿಟ್ಟರೆ, ಉಳಿದ ಹದಿನೆಂಟು ಆಶ್ವಾಸಗಳಲ್ಲಿ ಮಹಾಕಾವ್ಯದ ಅಂಗಗಳೆನಿಸಿದ ಅಷ್ಟಾದಶ ವರ್ಣನೆಗಳ ಪದ್ಯಗಳು ಕ್ರಮವಾಗಿ ಬರುತ್ತವೆ. ಆ ವರ್ಣನೆಗಳ ವಿವರಗಳನ್ನು ಕವಿ ಹೀಗೆ ಸಂಗ್ರಹಿಸಿದ್ದಾನೆ.;
ವಾರಿಧಿ ಪರ್ವತಂ ಪುರಮಧೀಶ್ವರನುದ್ವಹನಂ ಕುಮಾರನಂ 
ಭೋರುಹವೈರಿಮಿತ್ರರುದಯಂ ಋತು ನಂದನಮಂಬುಸೀಧು ಕಾಂ
ತಾರತಿ ಚಿಂತೆ ಮಂತ್ರ ಚರಯಾನ ವಿರೋಧಿ ಜಯಂಗಳೆಂಬಿವಂ
ಸೂರಿಗಳಂಗಮೆಂದು ಕೃತಿಯೊಳ್ ಪದಿನೆಂಟುಮನೆಯ್ದೆ ಬಣ್ಣಿಪರೆ
(ಸಮುದ್ರ, ಪರ್ವತ, ಪಟ್ಟಣ, ರಾಜ, ವಿವಾಹ, ರಾಜಕುಮಾರ, ಚಂದ್ರೋದಯ, ಸೂರ್ಯೋದಯ, ಋತುಗಳು, ಉದ್ಯಾನ ಜಲಕ್ರೀಡೆ, ಮದ್ಯಪಾನ, ಕಾಂತಾಸಂಭೋಗ, ಕಾಂತಾವಿರಹ, ಮಂತ್ರಾಲೋಚನೆ, ದೂತಕಾರ್ಯ, ಪ್ರಯಾಣ, ಶತ್ರುವಿಜಯ ಇವೇ ಕ್ರಮವಾಗಿ ಹದಿನೆಂಟು ವರ್ಣನೆಗಳು)
ಸೂಕ್ತಿಸುಧಾರ್ಣವ ಎಂದು ಹೆಸರಿದ್ದರೂ ಸೂಕ್ತಿಗಳೆಲ್ಲ ಬಹುಮಟ್ಟಿಗೆ ಪ್ರಕೃತಿ ವರ್ಣನೆಗೆ ಸಂಬಂಧಪಟ್ಟವು. ಕಾವ್ಯಾಸಾರ ಎಂಬುದು ಕೃತಿಯ ಇನ್ನೊಂದು ಹೆಸರು, ಆದರೆ ಉದಾಹೃತವಾದ ಪದ್ಯಗಳು ಕಾವ್ಯಗಳ ಸಾರ ಎನ್ನುವಂತಿಲ್ಲ. ಅಷ್ಟಾದಶವರ್ಣನೆಗಳು ಕಾವ್ಯದ ಸಾರವತ್ತಾದ ಭಾಗ. ಮಹಾಕಾವ್ಯದ ಮುಖ್ಯ ಲಕ್ಷಣ ಎಂಬ ಸಾಂಪ್ರದಾಯಿಕ ದೃಷ್ಟಿಗೆ ಈ ಗ್ರಂಥ ಕೈಗನ್ನಡಿ. ಮುಂದೆ ಬಂದ ಅನೇಕ ಕವಿಗಳ ಸಾಂಪ್ರದಾಯಿಕ ಮಹಾಕಾವ್ಯ ಶೈಲಿಗೆ ಇದು ಮಾರ್ಗದರ್ಶಕವಾಯಿತೆಂದು ಕಾಣುತ್ತದೆ. ಸಂಕಲನ ಗ್ರಂಥಗಳಲ್ಲಿ ಮೊದಲನೆಯದೆಂಬ ಕಾರಣದಿಂದ ಇದು ವಿಶೇóಷ ಮನ್ನಣೆಗೆ ಪಾತ್ರವಾಗುತ್ತದೆ. ವರ್ಣನಾ ಪದ್ಯಗಳು ಸರ್ವಸಾಮಾನ್ಯವಾಗಿ ಕವಿಸಮಯಕ್ಕೆ ಅನಿಸಾರವಾಗಿದ್ದರೂ ಪದವಿನ್ಯಾಸದ ದೇಸಿ, ಮಾರ್ಗದ ವಿಲಾಸ ಅಲಂಕಾರದ ಬಂಧ, ಭಾವದೆಸಕ ಮುಂತಾದ ಗುಣಗಳಿಂದ ಕೂಡಿರುವ ಈ ಕೃತಿ, ಕಾವ್ಯವಿಲಾಸಗೇಹ ಎಂದು ಕವಿ ಕೊಟ್ಟಿರುವ ವಿಶೇಷಣಕ್ಕೆ ಬಹುಮಟ್ಟಿಗೆ ಪಾತ್ರವಾಗಬಲ್ಲದು.	 						(ಎಂ.ವಿ.ಎಸ್.)

ಶಾಸನಗಳು: ಮಂಡ್ಯ ಜಿಲ್ಲೆಗೆ ಸೇರಿದ ಬಸರಾಳು ಗ್ರಾಮದ ಮಲ್ಲೇಶ್ವರ ದೇವಾಲಯದ ಹತ್ತಿರವಿರುವ ಒಂದೇ ಶಿಲೆಯಲ್ಲಿ ಮಲ್ಲಿಕಾರ್ಜುನರ ಎರಡು ದತ್ತಿ ಶಾಸನಗಳನ್ನು ಒಟ್ಟಿಗೇ ಕೆತ್ತಲಾಗಿದೆ. 121ನೆಯ ಶಾಸನೋಕ್ತಕಾಲ ಶಕ 1157 ಜಯ ಸಂವತ್ಸರ, ವೈಶಾಖ ಶುದ್ದ 2, ಸೋಮವಾರ ರೋಹಿಣಿ ನಕಷತ್ರ (1234); 122ನೆಯ ಶಾಸನೋಕ್ತಕಾಲ ಶಕ 1160 ಹೇವಿಳಂಬಿ ಸಂವತ್ಸರ, ಕಾರ್ತೀಕ ಶುಧ್ದ 2, ಗುರುವಾರ (1237). ಇವೆರಡರ ಶಾಸನೋಕ್ತಕಾಲಗಳಲ್ಲಿ ಮೂರು ವರ್ಷಗಳು ವ್ಯತ್ಯಾಸವಿದ್ದರೂ ಇವೆರಡನ್ನೂ 1237ರಲ್ಲಿಯೇ ಕೆತ್ತಿರಬಹುದು.

ಎರಡನೆಯ ನರಸಿಂಹ ಬಲ್ಲಾಳ ಹಾಗೂ ಅವನ ಅನಂತರದ ಸೋಮೇಶ್ವರ ಬಲ್ಲಾಳರಿಬ್ಬರಿಗೂ ಮಹಾಪ್ರಧಾನಿಯಾಗಿದ್ದ ಅಡ್ಡಾಯುಧದ ಹರಿಹರ ದಣ್ಣಾಯಕ ತನ್ನ ತಂದೆಯ ಹೆಸರಿನಲ್ಲಿ ಬಸುರಿವಾಳು ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಾಲಯವನ್ನೂ ಅಲ್ಲಿಯೇ ತಾಯಿಯ ಹೆಸರಿನಲ್ಲಿ ಕೆರೆಯನ್ನೂ ನಿರ್ಮಿಸಿ ದೇವಾಲಯಕ್ಕೆ ದತ್ತಿ ಬಿಟ್ಟ ವಿಷಯದ ಜೊತೆಗೆ ಎರಡನೆಯ ನರಸಿಂಹ ಬಲ್ಲಾಳನ ತನಕದ ಹೊಯ್ಸಳ ವಂಶದ ರಾಜರ ವಿಚಾರ, ಹರಿಹರ ದಣ್ಣಾಯಕನ ಮನೆತನ ಮತ್ತು ಆತನ ಹಿರಿತನದ ಕಥನ, ದತ್ತಿ ಮತ್ತು ದೇವತಾಕಾರ್ಯದ ವಿವರ ಇವು ಮೊದಲ ಶಾಸನದಲ್ಲಿ ನಿರೂಪಿತವಾಗಿವೆ. ಆ ದೇವಾಲಯಕ್ಕೆ ಪೂಜಾದಿಗಳಿಗೆ, ಜೀರ್ಣೋಧ್ಧಾರ ಕಾರ್ಯಕ್ಕೆ ಮತ್ತು ಸತ್ರಕ್ಕೆ ಎಂದು ಬಸುರಿವಾಳನ್ನೂ ಮತ್ತೆ ಬೇರೆ ಎರಡೂ ಗ್ರಾಮಗಳನ್ನೂ ಸೋಮೇಶ್ವರನಿಂದ ಬೇಡಿ ಪಡೆದು ದತ್ತಿ ಬಿಟ್ಟ ವಿಷಯದ ಜೊತೆಗೆ ಸೋಮೇಶ್ವರನ ಗುಣಶೌರ್ಯಾದಿಗಳ ನಿರೂಪಣೆ ಹರಿಹರ ದಣ್ಣಾಯಕ ಕೊಟ್ಟ ಹೆಚ್ಚಿನ ದತ್ತಿ ಮತ್ತು ದೇವತಾಕಾರ್ಯದ ವಿವರಗಳು 2ನೆಯ ಶಾಸನದಲ್ಲಿ ನಿರೂಪಿತವಾಗಿವೆ. ಎರಡು ಶಾಸನಗಳಲ್ಲಿಯೂ ಗದ್ಯ ಪದ್ಯಗಳೆರಡೂ ಇವೆ. ಪದ್ಯಗಳು ಕಂದ ಮತ್ತು ಖ್ಯಾತ ಕರ್ಣಾಟಕವೃತ್ತಾದಿಗಳಿಂದ ಕೂಡಿವೆ. ಇವು ಸುಂದರವಾದ ಶಬ್ದಶಯ್ಯೆಯಿಂದ, ಉಪಮೆ ರೂಪಕಾಲಂಕಾರಗಳಿಂದ, ಲಾಲಿತ್ಯ ಮತ್ತು ಅರ್ಥವ್ಯಕ್ತಿಗಳಿಂದ ಮತ್ತು ಕವಿಸಮಯಗಳಿಂದ ಕೂಡಿ ಮನನೀಯವಾಗಿವೆ. 2ನೆಯ ಶಾಸನದ ಕೊನೆಯ ಪದ್ಯ ಹೀಗಿದೆ.
	ಧರೆ ಪೊಗಳೆ ಚಿದಾನಂದಂ
	ವಿರಚಿಸಿದಂ ಸತ್ಕವೀಶ್ವರಂ ಶಾಸನಮಂ
	ಪರಮ ಪ್ರಕಾಶಯೋಗೀ
	ಶ್ವರ ತನಯಂ ಬ್ರಹ್ಮವಿದ್ಯೆಗಾಸ್ಪದರೂಪಂ
ಇದರಿಂದ ಇದನ್ನು ರಚಿಸಿದ ಕವಿ ಪರಮ ಪ್ರಕಾಶಯೋಗೀಶ್ವರನ ಮಗನೆಂದೂ ಬ್ರಹ್ಮ ವಿದ್ಯಾವೇತ್ತನೆಂದೂ ಸತ್ಕವೀಶ್ವರನೆಂದೂ ವ್ಯಕ್ತವಾಗುತ್ತದೆ.								  
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ